ಉಸಿರ್ನಾಳಕೊಯ್ಸೀಳಿಕೆ -
	ಉಸಿರ್ನಾಳವನ್ನು ಕೊಯ್ದು ಸೀಳುವ ಶಸ್ತ್ರಕ್ರಿಯೆ (ಟ್ರೇಕಿಯಾಟೊಮಿ). ಗಂಟಲಲ್ಲಿ ಏನಾದರೂ ಸಿಕ್ಕಿಕೊಂಡೋ ಗಾಯ ಪೆಟ್ಟುಗಳಿಂದಲೋ ರೋಗದಿಂದಲೋ ಆತಂಕವಾಗಿ, ಸರಾಗವಾಗಿ ಮೂಗಿನ ಮೂಲಕ ಉಸಿರಾಡದಂತಾದರೆ, ಉಸಿರು ಒಳಹೊಕ್ಕು ಬರುವಂತೆ ಲೋಹ ಕೊಳವೆ ತೂರಿಸಿಡಲು ಉಸಿರ್ನಾಳದಲ್ಲಿ ಮಾಡುವ ದಾರಿಯಿದು. ಗಂಟಲಮಾರಿ (ಡಿಫ್ತೀರಿಯಾ) ರೋಗದಲ್ಲಿ ಬೇಗನೆ ಚಿಕಿತ್ಸೆ ಆಗದಿದ್ದರೆ ಹೀಗೆ ಆತಂಕವಾಗುವುದು ಸಾಮಾನ್ಯ. ಧ್ವನಿನಾಳದಲ್ಲಿ ಗಂಟು ಬೆಳೆದುಕೊಂಡು ಅಡಚಣೆ ಆಗುವುದುಂಟು. ಆಗ ಉಸಿರ್ನಾಳ ಕೊಯ್ಸೀಳಿಕೆ ಮಾಡಬೇಕಾಗುತ್ತದೆ. ಬೆಳ್ಳಿಯ ಕೊಳವೆ ಒಂದು ಕಂಡಿಯಲ್ಲಿ ಇರಿಸಿದಲ್ಲೇ ಇರುವುದು. ಆಗಾಗ್ಗೆ ಹೊರತೆಗೆದು ಲೋಳೆಯನ್ನು ಒರಸಿ ತೊಳೆದಿಡಲು ಇದರೊಳಗೆ ಇನ್ನೊಂದು ಕೊಳವೆ ಇರುವುದು. ಉಸಿರ್ನಾಳ ಎಳೆಗೂಸುಗಳಲ್ಲಿ ಜೀವಾಳದ (ವೈಟಲ್) ಅಂಗಗಳೊಂದಿಗೆ ಆಳದಲ್ಲಿದ್ದರೂ ಬೆಳೆದವರಲ್ಲಿ ಮುಂಗತ್ತಿನ ಕೆಳಭಾಗದಲ್ಲಿ ಸುಲಭವಾಗಿ ಕೈಯಿಂದ ಮುಟ್ಟುವಂತಿರುವುದು. ಈ ಶಸ್ತ್ರಕ್ರಿಯೆಯಲ್ಲಿನ ಮುಖ್ಯ ಅಪಾಯವೆಂದರೆ ಅಲ್ಲಿ ಅಡ್ಡಹಾಯುವ ರಕ್ತನಾಳಗಳಿಂದ ಆಗಬಹುದಾದ ರಕ್ತಸುರಿತ.											
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ